January 1, 2011

ಶೆಟ್ಟರ ತಿರುಪತಿ ಲಾಡು

ಹಬ್ಬದ ದಿನಗಳಲ್ಲೇ ಚುನಾವಣೆ ಎಂಬ ಅನಿವಾರ್ಯ ಅನಿಷ್ಠ ಬಂದು ಭಕ್ತರಿಗೆ ಕೊಡಬಾರದ ಕಾಟ ಕೊಡುತ್ತದೆ. ಹೊಸ ವರ್ಷದ ಆಚರಣೇನ ಎಲ್ಲಿ? ಹೇಗೆ ಅದ್ಧೂರಿ ಯಿಂದ ಆಚರಿಸಬೇಕು ಅನ್ನೋ ಯೋಜನೆಯನ್ನ ಕೆಲವರು ವರ್ಷದ ಮೊದಲೇ ಚಚರ್ಿಸಿ ತೀಮರ್ಾನಿಸಿರುತ್ತಾರೆ. ಈಗ ನೋಡಿದರೆ ಡಿಸೆಂಬರ್ 31 ಕ್ಕೆ ಹಾಳಾದ ಚುನಾವಣೆ ಬಂದು ಕುಂತದೆ. ಚುನಾವಣೆಗೂ ಹೊಸ ವರ್ಷದ ಆಚರಣೆಗೂ ಬಾದರಾಯನ ಸಂಬಂಧವೂ ಇಲ್ಲ. ಅದರ ಪಾಡಿಗೆ ಅದು, ಇದರ ಪಾಡಿಗೆ ಇದು ಅನ್ನುವಂತಿಲ್ಲ. ಭರ್ಜರಿಯಾಗಿ ಹೊಸ ವರ್ಷ ಆಚರಿಸಿದೆವು ಅಂದ್ರೆ ಸಖತ್ತಾಗಿ ಕುಡ್ದು ತಿಂದು ಮಜಾ ಉಡಾಯಿಸಿದೊ ಎಂದೇ ಅರ್ಥ ತಾನೆ. ಅವತ್ತು ಮದ್ಯಪಾನ ನಿಷೇಧ ಅಂತೆ! ಅದೇ ಇಲ್ಲದ ಮೇಲೆ ಹೊಸ ವರ್ಷ ಆಚರಿಸುವುದಾದರೂ ಹೆಂಗೆ ಅನ್ನೋದು ಹಲವರ ಚಿಂತೆ. ಆರಂಭದ ಮೊದಲ ದಿನವೇ ಹಿಂಗಾದ್ರೆ ಇನ್ನು ವರ್ಷ ಪೂತರ್ಾ ಇನ್ನೇನು ಅನಿಷ್ಠಗಳು ಕಾದಿರುತ್ತವೋ ಎನ್ನುವುದು ಅವರ ಸಂಕಟ. ಹಂಗಾದ್ರೆ ಅವತ್ತು ಯಾರೂ ಕುಡಿಯೋದೆ ಇಲ್ವ ಅಂದ್ರೆ ಕುಡೀತಾರೆ, ಅವತ್ತು ಹೆಚ್ಚಿಗೇನೆ ಪರಮಾತ್ಮನ ಸೇವನೆ ಆಗಿರುತ್ತೆ. ಇದರಲ್ಲಿ ಯಾರ ಅಪರಾಧನೂ ಇಲ್ಲ. ಪರಮಾತ್ಮನ ಸೇವೆ ಮಾಡದೆ ಇದ್ದರೆ ನಿದ್ರಾದೇವಿ ಮತದಾರ ಬಂಧುವಿನ ಸಮೀಪವೂ ಸುಳಿಯುವುದಿಲ್ಲ ಎಂಬ ಕಟುಸತ್ಯವನ್ನು ಅರಿತ ಅಭ್ಯಥರ್ಿಗಳು ಧಾರಾಳವಾಗಿ ಮದ್ಯ ಸರಬರಾಜು ಮಾಡುವ ಮುಖಾಂತರ ಅವರ ಕಷ್ಟವನ್ನು ಪರಿಹರಿಸು ತ್ತಾರೆ. ಪ್ರಜ್ಞಾವಂತ ಮತದಾರ ಮಹಾಪ್ರಭುವೂ ಈ ಸೇವಾನಿಷ್ಠೆಗೆ ಸಂಪೂರ್ಣ ನ್ಯಾಯ ಒದಗಿಸುತ್ತಾನೆ! ಮದ್ಯ ಪಾನ ನಿಷೇಧ ಅಂತ ಕಾನೂನು ಇರುತ್ತದಲ್ಲ ಅಂದ್ರೆ ಅದರ ಪಾಡಿಗೆ ಅದು ಇರುತ್ತದೆ. ಎಲ್ಲರೂ ಕುಡಿಯೋ ಹಾಗೇನೆ ಹೊಸ ವರ್ಷ ಆಚರಣೆದಾರರೂ ತಾಯಿಯ ಸೇವನೆಮಾಡುತ್ತಾ ಅಮಲಿನ ಸುಖದಲ್ಲಿ ತೇಲಬಹುದಲ್ಲಾ ಅಂದ್ರೆ `ನೈತಿಕ ಪೊಲೀಸು' ಇದ್ನೇ ಕಾಯುತ್ತಾ ಕುಂತಿರ್ತವೆ. `ಬೇಕಾದ್ರೆ ಚುನಾವಣೆ ಹೆಂಡ ಕುಡೀರಿ, ವಷರ್ಾಚರಣೆ ಹೆಂಡ ಕುಡಿದರೆ ಹುಷಾರ್' ಅಂತ ಕೂಗಾಡ್ತವೆ.
`ಏನ್ ಸ್ವಾಮಿ ಇಂತ ಇಕ್ಕಟ್ಟಿಗೆ ಸಿಕ್ಕಿಸಿ ಬಿಟ್ರಿ ನಮ್ನ. ಹೊಸ ವರ್ಷ ಆಚರಿಸೋದು ಹೆಂಗೆ ಹೇಳಿ' ಅಂತ ಯಾರೋ ಚುನಾವಣಾ ಆಯುಕ್ತರ ಮುಂದೆ ತಮ್ಮ ಗೋಳು ತೋಡಿಕೊಂಡ್ರಂತೆ. ಅದ್ಕೆ ಅವ್ರು `ಹೊಸ ವರ್ಷ ಬರೋದು ರಾತ್ರಿ ಹನ್ನೆರಡು ಗಂಟೆಗಲ್ವೇನ್ರಿ.... ಆಮೇಲೆ ಕುಡ್ದು ಕುಪ್ಪಳಿಸಿ ಯಾರು ಬ್ಯಾಡ ಅಂದೋರು' ಅಂದ್ರಂತೆ. ಅಲ್ಲ ಹೊಸ ವರ್ಷ ಆಹ್ವಾನಿಸೋದು ಅಂದ್ರೆ ಸುಮ್ಕೆ ಆಯ್ತದಾ. ಒಳಗೆ ಪರಮಾತ್ಮ ನೆಮ್ಮದಿಯಾಗಿ ಕುಂತಿದ್ರೇ ಅದ್ಕೊಂದು ಇದು. ಅದ್ನೇ ಅವುರ್ಗೆ ಹೇಳಿದ್ಕೆ `ಯಾವ ಸಟ್ಗೆ.... ಹೋಗಿ ರಾತ್ರಿ ಎಂಟು ಗಂಟೆ ಮೇಲೆ  ಅದೇನ್ಮಾಡ್ತೀರೋ ಮಾಡ್ಕಳಿ' ಅಂತ ಧಾರಾಳವಾಗಿ ಹೇಳಿದ್ರಂತೆ. ಕುಡುಕರ ಸಂಕಟ ಅವರಿಗೆ ಗೊತ್ತಿಲ್ಲ. ಅವರಿಗೂ ಸೂರ್ಯಂಗೂ ಆಗ ಬರೋದಿಲ್ಲ. ದಿನಾ ಅವನು ಯಾವಾಗ ಸಾಯ್ತಾನೊ ಅಂತ ಕಾಯ್ತ ಕುಂತಿರ್ತಾರೆ. ಅವನು ಮುಳುಗಿದ ಅಂದ್ರೆ ಇವರು ಬಾಟಲಿ ಮುಂದೆ ಪ್ರತ್ಯಕ್ಷ ಆಗಲೇಬೇಕು. ಡಿಸೆಂಬರ್ ತಿಂಗ್ಳಲಿ ಆ ಸೂರ್ಯ ಅನ್ನೋನು ಸಂಜೆ ಆರು ಗಂಟೆಗೆಲ್ಲ ಕಾಣ್ದಂಗಾಯ್ತನೆ. ಅಲ್ಲಿಂದ ರಾತ್ರಿ ಎಂಟು ಗಂಟೆಯವರೆಗೆ ಕಾಯ್ತಾ ಕುಂತಿರೋದು ಅಂದ್ರೆ.... ಅದೂ ಹೆಂಡ ಮುಂದಿಟ್ಟುಕೊಂಡು ಕುಂತಿರೋದು ಅಂದ್ರೆ. ಆ ಸಂಕಟ ಅನುಭವಿಸಿದೋರ್ಗೆ ಗೊತ್ತು.
ಇದು ಹೊಸ ವರ್ಷ ಆಚರಿಸುವವರ ಪಾಡಾದ್ರೆ ಇನ್ನು ವೈಕುಂಠ ಏಕಾದಶಿ ಆಚರಿಸಿದ ಕೆಲವರ ಪಾಡಂತೂ ನಾಯಿಪಾಡೇ ಸರಿ. ನಮ್ಮ ಲಾಡು ಶೆಟ್ಟರು ಪಟ್ಟ ಸಂಕಟಾನೆ ನೋಡಿ. ಯಾರು ಈ ಶೆಟ್ಟರು ಅಂದ್ರಾ... ಅದೇ ಕೃಷ್ಣಯ್ಯ ಶೆಟ್ಟರು ಕಣ್ರಿ. ಇನ್ನೂ ಗೊತ್ತಾಗಲಿಲ್ವ... ಅದೇ ಕಣ್ರಿ ಗಂಗಾಜಲ ಗೋಮೂತ್ರದ ಶೆಟ್ಟರು. ಅವ್ರು ಭಕ್ತರಿಗೆ ತಿರುಪತಿ ಲಾಡು ಹಂಚೋದ್ರಲ್ಲಿ ಬೋ ಫೇಮಸ್ಸಲ್ವಾ. ಈ ಸಲಾನೂ ಜನರಿಗೆ ತಿರುಪತಿ ಲಾಡು ಹಂಚಾನ ಅಂತ ಅದೆಷ್ಟೋ ಲಕ್ಷ ತಿರುಪತಿ ಲಾಡು ಮಾಡಿಸಿದ್ರಂತೆ. ವೈಕುಂಠ ಏಕಾದಶಿ ದಿವಸ ಕೃಷ್ಣಯ್ಯ ಶೆಟ್ಟರು ತಿರುಪತಿ ಲಾಡು ತಿನ್ನಿಸಿ ಭಕ್ತರಿಗೆ ವೈಕುಂಠದಲ್ಲಿ ಸೀಟ್ ರಿಸವರ್್ ಮಾಡಿ ನೇರವಾಗಿ ಲಕ್ಷುರಿ ಟ್ರಾವೆಲ್ಸ್ನಲ್ಲಿ ಕಳಿಸುವ ಏಪರ್ಾಡು ಮಾಡಿದ್ದರಂತೆ. ಆಗ ಬಂತು ನೋಡಿ ಈ ಹಾಳಾದ ಚುನಾವಣೆ ಶನಿ. ಭಕ್ತರಿಗೆ ತಿರುಪತಿ ಲಾಡು ಹಂಚುವುದನ್ನೂ  ತಡೀತು, ನೀತಿಸಂಹಿತೆ ಉಲ್ಲಂಘನೆ ಆಗ್ತದೆ ಅಂತ! ಪಾಪ ಎಷ್ಟು ನೊಂದುಕೊಳ್ಳಬೇಡ ಲಾಡು ಶೆಟ್ಟರು.
ಅಲ್ಲ ಕಣ್ರಿ ತಿರುಪತಿ ಲಾಡು ಅಂತೀರಿ. ಕೃಷ್ಣಯ್ಯ ಶೆಟ್ಟರು ಇಲ್ಲೇ ಮಾಡ್ಸಿದ್ರು ಅಂತೀರಿ. ಎಲ್ಲಾ ಬೊಗಳೆ ಕಣ್ರೀ ನಿಂಮಾತು ಅನ್ನಬೇಡಿ. ಇಲ್ಲೇ ಮಾಡ್ಸಿದ್ರೂ ಅದು ತಿರುಪತಿ ಲಾಡುನೇ ಕಣ್ರಿ. ಹೆಂಗೆ ಅಂತೀರಾ....
ಈ ತಿರುಪತಿ ತಿಮ್ಮಪ್ಪ ಇದಾನಲ್ಲ ಬಲೇ ಸಾಲಗಾರ. ಸಾಲ ಪಡೆಯೋದೆ ತನ್ನ ಹಕ್ಕು ಅಂತಿದ್ದೋನಿಗೆ ಒಂದು ಸಲ `ಥೂ ಈ ದರಿದ್ರದ ಸಾಲ ತೀರಿಸಬಿಡಬೇಕು' ಅನ್ನೊ ಕೆಟ್ಟ ಆಲೋಚನೆ ಬಂತಂತೆ. ಏಳುಮಲೆ ಮೇಲೆ ಕುಂತ್ರೆ ವ್ಯಾಪಾರವೇನೋ ಪೊಗದಸ್ತಾಗಿ ನಡೀತದೆ ನಿಜ. ಸಾಲ ತೀರ್ಸೋಕೆ ಇದೇನೇನೂ ಸಾಲ್ದು. ಹೇಳಿಕೇಳಿ ಇದು ಐಟಿ, ಬಿಟಿಯುಗ. ನಮ್ಮೋರೆಲ್ಲ ಹೋಗಿ ಅಮೆರಿಕದಲ್ಲಿ ಕುಂತವ್ರೆ. ಸ್ವದೇಶಕ್ಕೆ ಬಂದ್ರೂ ನನ್ನ ಕಡೆಗೆ ಕ್ಯಾರೆ ಅಂತ ತಿರುಗೂ ನೋಡಲ್ಲೊ. ಆ ಬಡ್ಡೆತ್ತವು ನಾನ್ ರೆಸಿಡೆಂಟ್ ಇಂಡಿಯನ್ಸ್ ಆದಂಗೆ ನಾನೂ ಎನ್ಆರ್ಟಿ ಅಥರ್ಾತ್ ನಾನ್ ರೆಸಿಡೆಂಟ್ ತಿರುಪತಿಯನ್ ಆಗಿಬುಟ್ರೆ ಬಲೇ ಭರ್ಜರಿ ಆಗಿರುತ್ತಲ್ವಾ ಅಂತ  ಯೋಚಿಸಿದ್ನಂತೆ. ಅದ್ಕೇ ಅಲ್ಲಿ ಒಂದು ಬ್ರಾಂಚ್ ಓಪನ್ ಮಾಡಿದ. ಪರದೇಶಿಗಳಿಗೆ ತಮ್ಮ ದೇವರ ಮೇಲೆ ಭಕ್ತಿ ಅನ್ನೋದು ಉಕ್ಕುಕ್ಕಿ ಹರಿಯುತ್ತಲ್ವಾ. ಈಗಲೂ ಹಂಗೆ ಆಯಿತು. ಬ್ರಾಂಚ್ ಆಫೀಸಿನಲ್ಲೂ ಬಿಸಿನೆಸ್ಸು ಭರ್ಜರಿ ಆಗೇ ನಡೀತಿತ್ತು. ಆಮೇಲೆ ಅವನಿಗಿನ್ನೊಂದು ಆಲೋಚನೆ ಬಂತಂತೆ. ಬೆಂಗಳೂರು ಅನ್ನೋದು ಐಟಿ ಸೆಂಟರಾಗದೆ. ಪ್ರಪಂಚದ ಮೂಲೆಮೂಲೆಯಿಂದಲೂ ಜನ ಇಲ್ಲಿಗೆ ಬರ್ತಿರ್ತಾರೆ.  ಬಂದೋರು ತಿರುಪತಿ ಕಡೆಗೆ ತಿರ್ಗೂ ನೋಡೊಲ್ರು. ಆಯಾ ದೇಶದಲ್ಲೇ ಬ್ರಾಂಚ್ ಓಪನ್  ಮಾಡೋದಕ್ಕಿಂತ ಬೆಂಗಳೂರಲ್ಲೇ ಒಂದು ಓಪನ್ ಮಾಡಿದ್ರೆ ಹೆಂಗೆ ಅಂತ ಮನಸ್ಸಿನಲ್ಲೇ ಮಂಡಿಗೆ ತಿಂದನಂತೆ. ಭಗವಂತ ಅಲ್ವಾ ತಿರುಪತಿ ತಿಮ್ಮಪ್ಪ. ಯೋಚನೆ ಬಂದದ್ದೇ ತಡ, ಬೆಂಗಳೂರಿನಲ್ಲೂ ಒಂದು ಬ್ರಾಂಚ್ ತೆಗೆದನಂತೆ. ಅವನು ಬೆಂಗಳೂರಲ್ಲಿರಲಿ ಇಲ್ಲ ಅಮೆರಿಕದಲ್ಲಿರಲಿ ತಿರುಪತಿ ತಿಮ್ಮಪ್ಪನೇ ಅಲ್ವ. ಹಂಗೇನೆ ತಿರುಪತೀಲಿ ಮಾಡಲಿ ಇಲ್ಲ ಕೊಳಗೇರೀಲಿ ಮಾಡಲಿ. ಅವನ ಹೆಸರಿದ್ದ ಮೇಲೆ ಮುಗೀತು. ಅದು ತಿರುಪತಿ ಲಾಡೂನೆ!
ಸರಿ ಕೃಷ್ಣಯ್ಯ ಶೆಟ್ಟರ ಲಾಡು ವಿಚಾರಕ್ಕೆ ಬರೋಣವಂತೆ. ಅವ್ರು ಹಿಂಗೆ ಲಾಡು ಮಾಡಿ ಗುಡ್ಡೆ ಹಾಕಿದ್ರಲ್ಲಾ ಅವ ಹಂಚೋಕೋದ್ರೆ `ಬಿಲ್ಕುಲ್ ಆಗಕ್ಕಿಲ್ಲ' ಅಂದಿದ್ರಲ್ಲಾ. ಬೆಂಗಳೂರಿನ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೇ ಅವ ಕೊಡಬಹುದಾಗಿತ್ತು. ಆದ್ರೆ ಅವು ಬಡ ಭಕ್ತರಿಗೆ ಅಂತ ಮಾಡಿಸಿದ್ದೋವು. ಅವುರ್ಗೇ ಅವ ತಲುಪಿಸಬೇಕು. ಬೆಂಗಳೂರಿನ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಯಾವ ಬಡವ ಬಂದಾನು ಅನ್ನೋ ಚಿಂತೆಯಲ್ಲಿ `ಏನಪ್ಪ ತಿಮ್ಮಪ್ಪ ನಿನ್ನ ಲೀಲೆ. ನಿನ್ನೆಸರು ಇದ್ರೂ ಹಿಂಗೆ ತರಲೆ ತಗೀತಾವ್ರಲ್ಲ. ನೀನೇ ದಾರಿ ತೋರಿಸ್ಬೇಕು' ಅಂತ ಆ ದಯಾಮಯನಿಗೇ `ಗೈಡ್ ಮಾಡು ತಂದೆ' ಅಂತ ಗೋಗರಿದಿರಬೇಕು. ಆ ಭಗವಂತನಿಗೂ ಇದು ಕೇಳಿಸಿರಬೇಕು. `ಅದಕ್ಯಾಕೆ ಹಿಂಗೆ ಹ್ಯಾಪುಮೋರೆ ಹಾಕೊಂಡು ಕುಂತ್ಲಾ ಶೆಟ್ಟಿ. ಸ್ಕೂಲುಡ್ರುಗೆ ಹಂಚು' ಅಂದಿರಬೇಕು. ತಿಮ್ಮಪ್ಪನಾಜ್ಞೆಯಂತೆ ಶೆಟ್ಟರು ಮಾಲೂರು ಸ್ಕೂಲಿಗೆ ಹೋದರು. ಮಾಲೂರೇ ಯಾಕೆ ಅಂದ್ರೆ ಅದು ಕಣ್ಣಿಗೆ ಬಿತ್ತು ಅದ್ಕೆ.  ಅವರು ಆ ಕ್ಷೇತ್ರದ ಶಾಸಕರಾಗಿದ್ದದು ಆಕಸ್ಮಿಕ ಅಷ್ಟೆ! ಶಾಲೆಯ ಮಕ್ಕಳಿಗೆ ಹಂಚಬೇಕು ಅಂತಿದ್ರು. ಮತ್ತೆ ಭಗವಂತ `ಎಲಾ ಶೆಟ್ಟಿ ಬರೀ ಲಾಡು ಹಂಚಿದ್ರೆ ಏನು ಬಂದಂಗೆ ಆಯಿತ್ಲ. ಬಾಯಿ ಸೀ  ಆಯ್ತದೆ ಅಷ್ಟೇಯ. ವಸಿ ಹೊತ್ತಾದ ಮೇಲೆ ಮೊದಲಂಗೇ ಆಯ್ತದೆ. ಆ ಐಕ್ಳಿಗೆ ಹೊತ್ತೊತ್ಗೆ ಉಂಡೇ ಗೊತ್ತಿಲ್ಲ. ಯಾಕೇಂದ್ರೆ ಅವರ ತಾವ ವಾಚ್ ಇಲ್ಲ. ಅದ್ಕೇ ಲಾಡು ಜೊತೆ ವಾಚ್ನೂ ಕೊಡು' ಅಂದಿರಬೇಕು. ದೇವರ ಆಜ್ಞೆ ಅಲ್ವ. ಇದೂ ನಿಜವೇಯ. ವಾಚಿದ್ರೆ ತಿಮ್ಮಪ್ಪನ ಸೇವೇನೂ ಟೈಮಿಗೆ ಸರಿಯಾಗಿ ಮಾಡ್ತವೆ ಅಂತಾವ ಲಾಡೂ ಜೊತೆ ವಾಚನ್ನೂ ಹಂಚಿದರು. ಅಲ್ಲ ಇದನ್ನೂ ನೀತಿ ಸಂಹಿತೆ ಉಲ್ಲಂಘನೆ ಅಂತಾರಲ್ಲಾ... ದೇವರ ಸೇವೇಗೂ ಹಿಂಗಂದ್ರೆ... ಆ ತಿರುಪತಿ ತಿಮ್ಮಪ್ಪನೇ ಕಾಪಾಡಬೇಕು....
ಕೋಳಿ ಚುರಮುರಿ
ಚುನಾವಣೆ ಬಂದಾಗ ರೂಪಾಯಿ, ಹೆಂಡದ ಸೇವೆ ಮಾಡೋದು ಹಳೆ ಕಾಲದ ಮಾತಾಯಿತು. ಜನಕ್ಕೂ ಇದ ನೋಡಿನೋಡಿ ವಾಕರಿಕೆ ಬಂದೋಗದೆ. ಹೆಂಡ ಒಂದೇ ಕೊಟ್ರೆ ಆಯ್ತದಾ ನಂಚಿಕೊಳ್ಳೋಕೂ ಕೊಡಬೇಕು ಅನ್ನೋದು ಇತ್ತೀಚಿನ ಸುಧಾರಣೆ. ಒಂದು ದಿನ ಆದ್ರೂ ನೆಮ್ಮದಿಯಾಗಿ ಕುಡ್ದು ತಿಂದು ತೇಗಲಿ ಅಂತ ಹೆಚ್ಚುವರಿಯಾಗಿ ಒಂದೋಟಿಗೆ ಬಂದು ಉಂಡೇ ಕೋಳೀನೇ ಕೊಡ್ತಾ ಅವ್ರಂತೆ! ಇದು ಜನರ ಕಷ್ಟಕ್ಕೆ ಆಗೋದು ಅಂದ್ರೆ!
ಕೆಲವರಿರುತ್ತಾರೆ. ಆರು ತಿಂಗಳಿಗೆ ಹುಟ್ಟಿದೋವು. ಕೋಳಿ ಕೊಟ್ಟರೆ `ಅಯ್ಯೋ ಅದ ಕೂದು ಸಾರು ಮಾಡೋ ಹೊತ್ಗೆ ಸರೊತ್ತಾಗ್ತದೆ' ಅಂತ ಗೊಣಗುಟ್ಯವಂತೆ.  ಅವರ ಕಷ್ಟ ನೋಡಿ. ಚುನಾವಣೆ ಹೆಂಡ ಅದೆ. ಅದು ಕುಡಿಯಾನ ಅಂದ್ರೆ ಸೈಡ್ಗೇನೂ ಇಲ್ಲ. ಬ್ಯಾರೆ ದಿಸಾಗಿದ್ರೆ ಒಂದು ತರ. ಹೆಂಡ ಬಾಯಿಗೆ ಸುರ್ಕಂಡು ಒಂಡೆರ್ಡಳ್ಳು ಉಪ್ಪ ಎಸಗಂಡ್ರೆ ಸೈಡ್ ಕತೆ ಮುಗೀತಿತ್ತು. ಇವತ್ತೂ ಹಂಗೆ ಮಾಡ್ಲಿ ಅಂದ್ರೆ ಪ್ರಜ್ಞಾವಂತ ಮತದಾರನ ಹಕ್ಕಿಗೇ ಅವಮಾನ! ಅದ್ಕೇ ಕೆಲ ಸೇವಕರು ಸೈಡ್ ಡಿಷ್ಗೆ ಅಂತ ಕೋಳಿ ಚುರಮುರಿ ಕೊಟ್ತಾರಂತೆ! ಇದೇನಪ್ಪ ಕೋಳಿ ಚುರಮುರಿ ಅಂದ್ರೆ.... ಚುರಮುರಿಗೆ ಒಗ್ಗರಣೆ ಹಾಕುವಾಗಲೇ ಕೋಳಿಮಾಂಸದ ಚೂರುಗಳನ್ನೂ ಹಾಕುತ್ತಾರದಂತೆ! ಬಲೇಟೇಸ್ಟಾಗಿರ್ತದಂತೆ! ಜನ ಸೇವೆ ಅಂದ್ರೆ ಇದಕ್ಕೆ ಅನ್ನಬೇಕು!


ಎಚ್.ಎಲ್.ಕೇಶವಮೂರ್ತಿ

No comments:

Post a Comment