January 1, 2011

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಹೆಚ್ಚಿಸಿದ ಚಿಂತಕ

ಕನ್ನಡದ್ದೇ ಆದ ಚಿಂತನೆಯ ಹುಡುಕಾಟದ ಹಂಬಲವಿರುವ ಚಿಂತಕ ರಹಮತ್ ತರೀಕೆರೆ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸುವ ಮೂಲಕ ಆ ಪ್ರಶಸ್ತಿಯ ತೂಕ ಇಮ್ಮಡಿಯಾಗಿದೆ. ಕನ್ನಡದ ಚಿಂತನಾ ಕ್ರಮವನ್ನು ರೂಪಿಸುವಲ್ಲಿ ನಿರಂತರ ಅಧ್ಯಯನ, ಬರಹ, ತಿರುಗಾಟದಲ್ಲಿ ತೊಡಗಿದ ದಣಿವರಿಯದ ದುಡಿಮೆಗಾರನಿಗೆ ಸಂದ ಗೌರವವಿದು. ಕನ್ನಡ ಸಾಹಿತ್ಯ, ಸಂಸ್ಕೃತಿ ಚಿಂತನೆಯಲ್ಲಿ ತರೀಕೆರೆ ಅವರು ತಮ್ಮದೇ ಆದ ಆಲೋಚನ ವಿನ್ಯಾಸಗಳನ್ನು ರೂಪಿಸಿದ್ದಾರೆ. ಇದು ಈ ತನಕದ ತಿಳಿವಳಿಕೆಯ ವ್ಯಾಪ್ತಿಯನ್ನು ಅಗಾಧವಾಗಿ ವಿಸ್ತರಿಸಿದೆ. ಅವರ ಮೊದಲ ಕೃತಿ `ಪ್ರತಿಸಂಸ್ಕೃತಿ'ಯಲ್ಲೇ ಹೊಸ ಆಲೋಚನೆಯ ಒಳನೋಟಗಳನ್ನು ನೀಡಿ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಚಿಂತಕರಲ್ಲಿ ಭರವಸೆಯನ್ನು ಹುಟ್ಟಿಸಿದ್ದರು. ಅದು ಅವರ `ಮರದೊಳಗಣ ಕಿಚ್ಚು' ಕೃತಿಯಲ್ಲಿ ಇನ್ನಷ್ಟು ಖಚಿತವಾಯಿತು. ಈಚಿನ ಅವರ `ಚಿಂತನೆಯ ಪಾಡು' ಕೃತಿ ತನಕ ಪ್ರತಿಸಂಸ್ಕೃತಿ ಹುಡುಕಾಟದ ನೆಲೆಗಳಿಗೆ ಬೇರೆ ಬೇರೆ ಪ್ರವೇಶಗಳನ್ನು ಒದಗಿಸಿಕೊಟ್ಟಿದ್ದಾರೆ.
ಕನ್ನಡಕ್ಕೆ ಬೇಕು ಕನ್ನಡದ್ದೇ ಚಿಂತನಾಕ್ರಮ ಎನ್ನುವ ಅವೈದಿಕ ಆಲೋಚನೆಯ ಬಿತ್ತಿ ತರೀಕೆರೆ ಅವರ ಒಟ್ಟು ಬರಹದ ತಾತ್ವಿಕತೆ. ಗೆರೆ ಕೊರೆದು ಬೇರ್ಪಟ್ಟಂತಹ ಹಲವು ಜ್ಞಾನಶಾಖೆಗಳ ಸಾಂಪ್ರದಾಯಿಕ ಕಟ್ಟುಗಳನ್ನು ಮುರಿದು, ಅವುಗಳ ನಡುವೆ ಒಡನಾಡುವ ಸಂಬಂಧವನ್ನು ಸಾಧ್ಯವಾಗಿಸಿದ್ದು ಅವರ ಚಿಂತನೆಯ ಶಕ್ತಿ. ಹಾಗಾಗಿ ಅವರನ್ನು ಯಾವುದೋ ಒಂದು ಚೌಕಟ್ಟಿನಲ್ಲಿ ಕೂರಿಸಲು ಸಾಧ್ಯವಿಲ್ಲ. ಅವರೊಳಗೊಬ್ಬ ಇತಿಹಾಸಕಾರ, ಸಂಸ್ಕೃತಿ ಚಿಂತಕ, ಮಾನವಶಾಸ್ತ್ರಜ್ಞ, ಸಾಹಿತ್ಯ ವಿಮರ್ಶಕ, ಜಾನಪದ ವಿದ್ವಾಂಸ, ಚಳವಳಿಗಾರ, ಸೃಜನಶೀಲ ಬರಹಗಾರ, ಇವೆಲ್ಲಕ್ಕಿಂತ ಮುಖ್ಯವಾಗಿ ಮಾನವೀಯ ಅಂತಃಕರಣದ ವ್ಯಕ್ತಿ ಇದ್ದಾನೆ. ಹಾಗಾಗಿಯೇ ಅವರ ಚಿಂತನೆಯೊಳಗೆ ಇವೆಲ್ಲವುಗಳನ್ನು ಹೀರಿಕೊಂಡಂತಹ ಆಲೋಚನಾ ಕ್ರಮವಿದೆ. ಇದು ಅವರು ಏಕಕಾಲದಲ್ಲಿ ಸಂಸ್ಕೃತಿ ಚಿಂತಕರಾಗಿ, ವಿಮರ್ಶಕರಾಗಿ, ಇತಿಹಾಸಕಾರರಾಗಿ, ನಾಡುನುಡಿ ಚಿಂತಕರಾಗಿ ಹಲವು ವಿದ್ವತ್ತುಗಳ ಸಂಗಮವಾಗಲು ಸಾಧ್ಯವಾಗಿದೆ. ಕನ್ನಡ ವಿಶ್ವವಿದ್ಯಾಲಯದ ದೇಸಿ ಚಿಂತನೆಯ ಆಲೋಚನಾ ಕ್ರಮವನ್ನು ರೂಪಿಸುತ್ತಿರುವವರಲ್ಲಿ ತರೀಕೆರೆ ಪ್ರಮುಖರು.
`ಕನರ್ಾಟಕದ ಸೂಫಿಗಳು' ಮತ್ತು `ಕನರ್ಾಟಕದ ನಾಥಪಂಥ' ಈ ಎರಡೂ ಕನರ್ಾಟಕದ ಸಾಂಸ್ಕೃತಿಕ ಅಧ್ಯಯನದ ಬಹಳ ಮುಖ್ಯವಾದ ರಚನೆಗಳು. ಇವು ಕನ್ನಡನಾಡಿನ ತಿಳುವಳಿಕೆಯನ್ನು ತೀರಾ ಭಿನ್ನವಾಗಿ ವಿಸ್ತರಿಸಿವೆ. ಅವರ ಸಂಸ್ಕೃತಿಯನ್ನು ಕುರಿತ ವ್ಯಾಖ್ಯಾನಗಳಲ್ಲಿ ಜನಸಾಮಾನ್ಯರ ಜ್ಞಾನಕೋಶವನ್ನು, ಅವರ ಬದುಕಿನ ಕ್ರಮವನ್ನೂ, ಚೈತನ್ಯದ ಶಕ್ತಿಯನ್ನೂ ಒಳಗೊಳ್ಳಲು ಸಾಧ್ಯವಾಗಿದೆ. ಜನರ ಆಲೋಚನಾ ಕ್ರಮದ ಕಣ್ಣೋಟದಿಂದ ಕನ್ನಡ ಸಾಹಿತ್ಯವನ್ನು, ಸಂಸ್ಕೃತಿಯನ್ನು ನೋಡಿದ ಒಂದು ವಿಶಿಷ್ಟ ಮಾದರಿ ಅವರದು. ಕನ್ನಡದ್ದೇ ಆದ ಚಿಂತನಾ ಮಾದರಿಯನ್ನು ವರ್ತಮಾನದ ಎಚ್ಚರದ ಮೂಲಕ ಕಟ್ಟುತ್ತಿರುವ ಕಾರಣಕ್ಕೆ ತರೀಕೆರೆ ಅವರು ನಮ್ಮ ಕಾಲದಲ್ಲಿ ಮುಖ್ಯರಾಗುತ್ತಾರೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನವಾದ `ಕತ್ತಿಯಂಚಿನ ದಾರಿ' ಕನ್ನಡದ ಸಾಹಿತ್ಯ ವಿಮಶರ್ೆ, ಸಾಂಸ್ಕೃತಿಕ ವಿಮಶರ್ೆಯಾಗಿ ರೂಪಾಂತರಗೊಳ್ಳುತ್ತಿರುವ ಛಾಯೆ ದಟ್ಟವಾಗಿರುವ ಕೃತಿ. ಕುವೆಂಪು, ರಾಮಚಂದ್ರಶರ್ಮ, ನಿಸಾರ್, ತೇಜಸ್ವಿ, ಡಿ. ಆರ್ .ನಾಗರಾಜ, ಶಾಂತಿನಾಥ ದೇಸಾಯಿ, ಕಾರಂತ, ದೇವಚಂದ್ರ, ಬಸವಣ್ಣ, ರಾಘವಾಂಕ, ಶಿವಕೋಟ್ಯಾಚಾರ್ಯ, ಸುಬ್ಬಣ್ಣ, ಚನ್ನಯ್ಯ, ಲಂಕೇಶ್, ಮೊಕಾಶಿ ಪುಣೇಕರ, ಕುಂವಿ -ಹೀಗೆ ಕನ್ನಡ ಸಾಹಿತ್ಯ ಪರಂಪರೆಯನ್ನು ಕಟ್ಟಿದ ಮನಸ್ಸುಗಳ ಜತೆ ತರೀಕೆರೆ ಅವರು ಮುಖಾಮುಖಿಯಾಗಿ ವಾಗ್ವಾದಗಳನ್ನು ಹುಟ್ಟಿಸಿದ್ದಾರೆ. ಇಲ್ಲಿನ ಕೆಲವು ಗ್ರಹಿಕೆಗಳು ಕನ್ನಡದ ವಿಮಶರ್ೆಯಲ್ಲಿಯೇ ಅಪರೂಪದ ಒಳನೋಟಗಳಾಗಿವೆ. ಇಂತಹ ಕೃತಿಗೆ ಅಕಾಡೆಮಿ ಪ್ರಶಸ್ತಿ ಲಭಿಸಿರುವುದು ಕನ್ನಡದ ಸಂಸ್ಕೃತಿ ಚಿಂತನೆಗೆ ಸಂದ ಗೌರವವಾಗಿದೆ. ಕನರ್ಾಟಕದಾದ್ಯಂತ ತಿರುಗಾಡಿ, ಜನಬದುಕಿನ ತಳಮಳಗಳನ್ನೂ, ಚೈತನ್ಯವನ್ನೂ ಗುರುತಿಸುತ್ತಾ ಬರಹ ಮಾಡುತ್ತಿರುವ ಕನ್ನಡದ ಸೂಕ್ಷ್ಮ ಸಂವೇದನೆಯ ರಹಮತ್ ತರೀಕೆರೆ ಅವರಿಗೆ ಈ ಸಂದರ್ಭದಲ್ಲಿ ಹೃತ್ಪೂರ್ವಕವಾಗಿ ಅಭಿನಂದಿಸೋಣ.
ಅರುಣ್ ಜೋಳದ ಕೂಡ್ಲಿಗಿ

No comments:

Post a Comment